ಕಪಿಲಾ : ಕಪಿನಿ, ಕಬಿನಿ ಎಂಬ ಹೆಸರುಗಳೂ ಇರುವ ಈ ನದಿ ಕಾವೇರಿ ನದಿಯ ಪ್ರಧಾನ ಉಪನದಿಗಳಲ್ಲಿ ಒಂದು. ನದಿಯ ಉಗಮಸ್ಥಾನ ಕೇರಳದ ವೈನಾಡು ತಾಲ್ಲೂಕಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ 2,100ಮೀ.ಗಳಿಗಿಂತಲೂ ಎತ್ತರ ಪ್ರದೇಶದಲ್ಲಿದೆ. ಅಲ್ಲಿಂದ ಅಲ್ಪ ದೂರ ವೈನಾಡಿನಲ್ಲಿ ಪ್ರವಹಿಸಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ನೈಋತ್ಯ ಮೂಲೆಯಲ್ಲಿ ಬÁವಲಿಯ ಬಳಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತದೆ. ನದಿಯ ಹರಿವಿನ ಹೆಚ್ಚು ಭಾಗ ಮೈಸೂರು ಜಿಲ್ಲೆಯಲ್ಲಿದೆ. ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಮೊದಲು ಮಗ್ಗೆ, ನಿಸನ ಗ್ರಾಮಗಳ ಮೂಲಕ ಸರಗೂರಿನವರೆಗೆ ಈಶಾನ್ಯಾಬಿsಮುಖವಾಗಿ ಹರಿದು ಅಲ್ಲಿಂದ ಉತ್ತರಕ್ಕೆ ಚಕ್ಕೂರಿನವರೆಗೆ ಸಾಗಿ ಅನಂತರ ಪುರ್ವಾಬಿsಮುಖವಾಗಿ ಹರಿಯುತ್ತ ನಂಜನಗೂಡು ತಾಲ್ಲೂಕನ್ನು ಪ್ರವೇಶಿಸುತ್ತದೆ. ಇಲ್ಲಿ ಹುಲ್ಲಹಳ್ಳಿಯ ಮುಖಾಂತರ ನಂಜನಗೂಡಿನವರೆಗೆ ಬಂದು ಮತ್ತೆ ಈಶಾನ್ಯಕ್ಕೆ ತಿರುಗಿ ತಿರುಮಕೂಡಲು ನರಸೀಪುರದಲ್ಲಿ ಕಾವೇರಿಯನ್ನು ಸಂದಿsಸುತ್ತದೆ. ಹರಿವಿನ ಅಂತ್ಯದ ಸ್ವಲ್ಪ ಭಾಗ ಮಾತ್ರ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿದೆ. ನದಿಯ ಹರಿವಿನ ಒಟ್ಟು ಉದ್ದ ಸು.214ಕಿಮೀ.

ನದಿಯ ಪಾತ್ರದ ಅಗಲ ಸಾಮಾನ್ಯವಾಗಿ 150-200ಮೀಗಳಿದ್ದು ಪಕ್ಕದಲ್ಲಿ ಎತ್ತರದ ದಂಡೆಗಳಿರುವುದು ಸಾಮಾನ್ಯ. ನದಿಯಲ್ಲಿ ವರ್ಷಪುರ್ತ ನೀರಿರುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಬೇಸಗೆಯಲ್ಲೂ ಇದರಲ್ಲಿ ಸಾಗುವ ನೀರಿನ ಪ್ರಮಾಣ ಕಾವೇರಿಯದಕ್ಕಿಂತಲೂ ಕಡಿಮೆಯಿರುವುದಿಲ್ಲ. ತಾರಕಾ, ನುಗು ಮತ್ತು ಗುಂಡ್ಲುಹೊಳೆ ಕಪಿಲಾ ನದಿಯ ಮುಖ್ಯ ಉಪನದಿಗಳು. ತಾರಕಾ ಹೆಗ್ಗಡದೇವನಕೋಟೆಯ ಮೂಲಕ ಹರಿದು ಬಂದು ಹಂಪಾಪುರದ ಪಶ್ಚಿಮಕ್ಕೆ ಸು.12ಕಿಮೀ ದೂರದಲ್ಲಿ ಮಟಕೆರೆಯ ಬಳಿ ಸೇರುತ್ತದೆ. ಮಿಕ್ಕೆರಡೂ ದಕ್ಷಿಣ ದಂಡೆಯಿಂದ ಬಂದು ಸೇರುವುವು. ನುಗುನದಿ ಹುಲ್ಲಹಳ್ಳಿಯಿಂದ ಸು.8ಕಿಮೀ ಪಶ್ಚಿಮದಲ್ಲಿರುವ ಮಲಾರದ ಹುಂಡಿ ಬಳಿಯೂ ಗುಂಡ್ಲುಹೊಳೆ ನಂಜನಗೂಡಿನ ಬಳಿಯೂ ಸೇರುತ್ತದೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ (ಹತ್ವಾಳ) ಅಣೆಕಟ್ಟಿನಿಂದ ಹೊರಡುವ ಎರಡು ನಾಲೆಗಳು ನದಿಯ ಎಡ ಮತ್ತು ಬಲದಂಡೆಯಲ್ಲಿ ಸಾಗಿ ತಾಲ್ಲೂಕಿನ ಬಹುಭಾಗಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸುತ್ತವೆ. ಹೆಗ್ಗಡದೇವಕೋಟೆ ತಾಲ್ಲೂಕಿನ ತುಮ್ಮಸೋಗೆ, ಮಾದಾಪುರ, ಹೊಮ್ಮರಗಳ್ಳಿ - ಈ ಸ್ಥಳಗಳಲ್ಲೂ ಮುಂದೆ ಹುಲ್ಲಹಳ್ಳಿ, ನಂಜನಗೂಡು ಮತ್ತು ತಿರುಮಕೂಡಲು ನರಸೀಪುರಗಳ ಬಳಿಯೂ ಈ ನದಿಗೆ ಸೇತುವೆಗಳಿವೆ. ನದಿಯ ದಕ್ಷಿಣ ದಂಡೆಯಲ್ಲಿರುವ ನಂಜನಗೂಡು ಮತ್ತು ಕಾವೇರಿ ಸಂಗಮದ ಬಳಿ ಇರುವ ತಿರುಮಕೂಡಲು ನರಸೀಪುರ ದೊಡ ಊರುಗಳು ಹಾಗೂ ಪುಣ್ಯಕ್ಷೇತ್ರಗಳು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ